ವಿಜ್ಞಾನೇಶ್ವರ
	ಸು. 11-12ನೆಯ ಶತಮಾನದಲ್ಲಿದ್ದ ಪ್ರಸಿದ್ಧ ಧರ್ಮಶಾಸ್ತ್ರ ಕಾರ. ಯಾಜ್ಞವಲ್ಕ್ಯಸ್ಮøತಿಯ ಮೇಲೆ ಮಿತಾಕ್ಷರಾ ಎಂಬ ವ್ಯಾಖ್ಯಾನವನ್ನು ಸಂಸ್ಕøತದಲ್ಲಿ ಬರೆದಿದ್ದಾನೆ. ಇವನು ಕಲ್ಯಾಣ ಚಾಳುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ (1076-1127) ಆಸ್ಥಾನವನ್ನಲಂಕರಿಸಿದ್ದು ಚಕ್ರವರ್ತಿಯಿಂದ ಪ್ರೇರಿತನಾಗಿ ಮಿತಾಕ್ಷರಾ ಗ್ರಂಥವನ್ನು ಬರೆದಿರುವ ನೆಂಬುದು ವಿದ್ವಾಂಸರ ಅಭಿಪ್ರಾಯ. ಇವನು ತನ್ನನ್ನು ಗ್ರಂಥದಲ್ಲಿ ವಿಜ್ಞಾನಯೋಗಿನ್ ಎಂದು ಕರೆದುಕೊಂಡಿದ್ದಾನೆ. ಗ್ರಂಥದ ಸಮಾಪ್ತಿ ವಚನಗಳಿಂದ ತಿಳಿದುಬರುವಂತೆ ಪದ್ಮನಾಭಭಟ್ಟ ಇವನ ತಂದೆ, ಉತ್ತಮ ಇವನ ಗುರು.

	ವ್ಯಾಕರಣಶಾಸ್ತ್ರದಲ್ಲಿ ಪತಂಜಲಿಯ ಮಹಾಭಾಷ್ಯದಂತೆ ಅಥವಾ ಅಲಂಕಾರ ಶಾಸ್ತ್ರದಲ್ಲಿ ಮಮ್ಮಟನ ಕಾವ್ಯಪ್ರಕಾಶದಂತೆ ಧರ್ಮಶಾಸ್ತ್ರ ಇತಿಹಾಸದಲ್ಲಿ ಮಿತಾಕ್ಷರಾ ಗ್ರಂಥದ ಸ್ಥಾನ ಅತಿ ವಿಶಿಷ್ಟವಾದುದು. ಈ ಗ್ರಂಥ ತನ್ನ ಕಾಲಕ್ಕಿಂತ ಸು. 2000 ವರ್ಷ ಮುಂಚಿನ ಧರ್ಮಶಾಸ್ತ್ರ ವಿಚಾರದ ಸಾರವನ್ನು ನಮ್ಮ ಮುಂದಿಡುವುದು ಮಾತ್ರವಲ್ಲದೆ, ನೂತನ ವ್ಯಾಖ್ಯಾನ ಪ್ರವಾಹಗಳಿಗೆ ಆದಿಮೂಲದಂತಿದೆ. ಇದು ಅನಂತರ ಬೆಳೆದು ಬಂದ ನಿಬಂಧಗಳಿಗೆ ಪೂರ್ವಗಾಮಿಯಾಗಿದ್ದು, ಗ್ರಂಥದ ಪ್ರತಿ ಪಂಕ್ತಿ ಯಲ್ಲೂ ಎದ್ದು ಕಾಣುವ ಪಾಂಡಿತ್ಯ, ವಿವೇಕಯುಕ್ತ ನಿರ್ಣಯ, ಪದವಿನ್ಯಾಸದಲ್ಲಿ ಸಂಕ್ಷಿಪ್ತತೆ ಮುಂತಾದ ಗುಣಗಳಲ್ಲಿ ಆ ನಿಬಂಧಗಳಿಗಿಂತ ಶ್ರೇಷ್ಠತರ ವೆನಿಸಿದೆ. ಹೆಸರೇ ಸೂಚಿಸುವಂತೆ, ಮಿತಾಕ್ಷರಾ ವಿಷಯನಿರೂಪಣೆಯಲ್ಲಿ ಸಂಕ್ಷಿಪ್ತ ಹಾಗೂ ಪ್ರಸಕ್ತ ವಿಷಯಕ್ಕೆ ಎಷ್ಟೋ ಅಷ್ಟು ಎನ್ನುವಂತಿದ್ದರೂ ಕೆಲವು ಕಡೆ ಸುದೀರ್ಘವಾದ ವ್ಯಾಖ್ಯಾನಗಳಿರು ವುದೂ ಉಂಟು. ತನ್ನ ಗ್ರಂಥ ಧರ್ಮಶಾಸ್ತ್ರದ ವಿವಿಧ ಆದೇಶಗಳ ಭಂಡಾರ ಹಾಗೂ ಸಂಶ್ಲೇಷಣ ವಾಗಬೇಕೆಂಬ ವ್ಯಾಖ್ಯಾನಕಾರನ ಆಕಾಂಕ್ಷೆಯೇ ಇದಕ್ಕೆ ಪ್ರಧಾನ ಕಾರಣ. ವಿದ್ವಾಂಸರು ಲೆಕ್ಕ ಹಾಕಿರುವಂತೆ, ಮಿತಾಕ್ಷರಾದಲ್ಲಿ ಉಲ್ಲೇಖಿತ ವಾಗಿರುವ ಸ್ಮøತಿಗಳ, ಸ್ಮøತಿಕಾರರ ಒಟ್ಟು ಸಂಖ್ಯೆ89. ಅಲ್ಲದೆ ವೇದ, ಉಪನಿಷತ್, ನಿರುಕ್ತ, ಯೋಗಸೂತ್ರ, ಭರತ (ನಾಟ್ಯಶಾಸ್ತ್ರ), ಪಾಣಿನಿಯ ವ್ಯಾಕರಣ, ಸುಶ್ರುತ ಸಂಹಿತೆ, ಸ್ಕಂದಪುರಾಣ, ವಿಷ್ಣುಪುರಾಣ, ಅಮರ ಮತ್ತು ಗುರು (ಪ್ರಭಾಕರ)-ಈ ಆಕರಗಳೂ ಉಲ್ಲೇಖಿತವಾಗಿವೆ. ವಿಜ್ಞಾನೇಶ್ವರನಿ ಗಿಂತ ಹಿಂದಿನ ಸ್ಮøತಿ ವ್ಯಾಖ್ಯಾನಕಾರರಾದ ಮತ್ತು ಸಾರಸಂಗ್ರಹಕಾರರಾದ ಅಸಹಾಯ, ವಿಶ್ವರೂಪ, ಮೇಧಾತಿಥಿ, ಶ್ರೀಕರ, ಭಾರುಚಿ ಮತ್ತು ಭೋಜದೇವ ಇವರನ್ನು ಹೆಸರಿಸುತ್ತದೆ.

	ಮಿತಾಕ್ಷರಾ ಕೇವಲ ಯಾಜ್ಞವಲ್ಕ್ಯ ಸ್ಮøತಿಯ ಮೇಲಿನ ವ್ಯಾಖ್ಯಾನವಾ ಗಿರದೆ, ಸ್ಮøತಿ ವಿಷಯಗಳ ಸಾರಸಂಗ್ರಹವಾಗಿದ್ದು, ಹೆಚ್ಚು ಕಡಿಮೆ ಒಂದು ಸ್ವತಂತ್ರ ಗ್ರಂಥದಂತಿದೆ. ಎಲ್ಲ ಪ್ರಮುಖ ಸ್ಮøತಿಕಾರರ ಅಭಿಪ್ರಾಯ ಗಳನ್ನೂ ಕೂಲಂಕಷವಾಗಿ ಚರ್ಚಿಸಿ, ಎಲ್ಲ ವಿಷಯಗಳಲ್ಲೂ ಕಡೆಗೆ ತನ್ನದೇ ಆದ ನಿರ್ಧಾರಕ್ಕೆ ಬರುವುದು ಈ ಕೃತಿಯ ವೈಶಿಷ್ಟ್ಯ. ಹಲವಾರು ಧರ್ಮಶಾಸ್ತ್ರಗಳಲ್ಲಿನ ಉದ್ಧøತ ಭಾಗಗಳನ್ನು ಒಂದೆಡೆಗೆ ತಂದು ಚರ್ಚಿಸು ವಾಗ, ಅವುಗಳಲ್ಲಿ ಕಂಡುಬರುವ ವಿರೋಧೋಕ್ತಿಗಳನ್ನು ಮೀಮಾಂಸಾ ಶಾಸ್ತ್ರದ ಅರ್ಥವಿವರಣೆಯ ನಿಯಮಗಳನ್ನು ಅನುಸರಿಸಿ ತಿದ್ದಿತೇಲಿಸಿ, ವಿವಿಧ ಸೂಕ್ತಿಗಳಿಗೆ ನಿಷ್ಕøಷ್ಟವಾದ ವ್ಯಾಪ್ತಿಯನ್ನು ನಿರ್ದೇಶಿಸಿ (ವಿಷಯ ವ್ಯವಸ್ಥಾ) ಒಂದು ಸರಿಯಾದ ಕ್ರಮವನ್ನುಂಟುಮಾಡುತ್ತದೆ. ಅಲ್ಲದೆ, ಅಸಂಬದ್ಧವೆಂದು ತೋರುವ ಸ್ಮøತ್ಯಾದೇಶಗಳಲ್ಲಿಯೂ ಸಿದ್ಧಾಂತ ಸಮನ್ವಯವನ್ನು ಸಾಧಿಸುತ್ತದೆ.

	ಮತ್ತೊಂದು ಗಮನಾರ್ಹವಾದ ಅಂಶವೆಂದರೆ, ಆಧುನಿಕ ಭಾರತದ ರಚನೆಯಲ್ಲಿ ಮಿತಾಕ್ಷರಾ ವಹಿಸಿರುವ ಅತ್ಯಂತ ಪ್ರಮುಖಪಾತ್ರ. ಬಂಗಾಲ ಮತ್ತು ಮಹಾರಾಷ್ಟ್ರ ವಿನಾ ಭಾರತದ ಉಳಿದ ಪ್ರದೇಶಗಳಲ್ಲೆಲ್ಲ (ಉದಾ : ದತ್ರ ಸ್ವೀಕಾರ, ಪಿತ್ರಾರ್ಜಿತ ಆಸ್ತಿ, ಸ್ಥಿರಾಸ್ತಿಯ ಹಂಚಿಕೆ ಇತ್ಯಾದಿ) ಹಿಂದು ನ್ಯಾಯಶಾಸ್ತ್ರದ ಹಲವಾರು ವಿಷಯಗಳಿಗೆ ಸಂಬಂಧಪಟ್ಟಂತೆ ಮಿತಾಕ್ಷರಾ ಇಂದಿಗೂ ಪ್ರಮಾಣಗ್ರಂಥವಾಗಿದೆ.

	11-12ನೆಯ ಶತಮಾನಗಳ ಕರ್ನಾಟಕದ ಜನಜೀವನವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಮಿತಾಕ್ಷರಾ ಒಂದು ಪ್ರಧಾನವಾದ ಆಕರಗ್ರಂಥ. ಹಲವಾರು ಸಂದರ್ಭಗಳಲ್ಲಿ ವ್ಯಾಖ್ಯಾನಮಾಡುವಾಗ, ಮೂಲದಲ್ಲಿಲ್ಲದ, ಆದರೆ ತನ್ನ ಸಮಕಾಲೀನ ಸಮಾಜದಲ್ಲಿ ಕಂಡುಬರುವ, ವಿಷಯ-ವಿವರಗಳನ್ನು ವಿಜ್ಞಾನೇಶ್ವರ ಒದಗಿಸಿದ್ದಾನೆ. ವಿಜ್ಞಾನೇಶ್ವರ ನನ್ನು ಕುರಿತಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಪ್ರಸಿದ್ಧ ನ್ಯಾಯಾಧೀಶರಾಗಿದ್ದ ರಾಮಾಜೋಯಿಸ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಗುಲ್ಬರ್ಗದಲ್ಲಿ ಸಂಶೋಧನ ಕೇಂದ್ರ ವೊಂದನ್ನು ಸ್ಥಾಪಿಸಲಾಗಿದೆ.				
		(ಎಸ್.ಜಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ